ತ್ರಿವರ್ಣದ ನೆರಳಿನಲ್ಲಿ…

ಆಗಸ್ಟ್ ಆರಂಭವಾಗುತ್ತಿದ್ದಂತೆ ಮೈಸೂರಿನ ಆ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯದ ತೇರು ಚಲಿಸತೊಡಗಿತ್ತು. ತರಗತಿಗಳನ್ನು ಶೃಂಗರಿಸಿದ್ದ ತ್ರಿವರ್ಣ ಕಾಗದದ ಸರಪಳಿಗಳು, ಕಿಟಕಿಗಳಲ್ಲಿ ನಲಿದಾಡುವ ಪುಟ್ಟ ಧ್ವಜಗಳು ದೇಶಭಕ್ತಿಯ ರಂಗು ತುಂಬುತ್ತಿದ್ದವು. ಅಂತಹ ಒಂದು ಮಧ್ಯಾಹ್ನ, ಸೂಚನಾ ಫಲಕದ ಮೇಲೆ ಕ್ರೀಡಾ ಶಿಕ್ಷಕರು ಅಂಟಿಸಿದ ಪ್ರಕಟಣೆ ವಿದ್ಯಾರ್ಥಿಗಳನ್ನು ಸೆಳೆಯಿತು—‘ಪಥಸಂಚಲನ ಆಯ್ಕೆ ಪ್ರಕ್ರಿಯೆ – ಮಧ್ಯಾಹ್ನ 2:00 ಗಂಟೆಗೆ’.

“ಹದಿನೈದು ದಿನಗಳ ಸತತ ಅಭ್ಯಾಸವಂತೆ!” ಗೆಳತಿಯರ ಉದ್ಗಾರಕ್ಕೆ ಪದ್ಮಾ ಕಣ್ಣು ಹಾಯಿಸಿ ಮುಖ ತಿರುಗಿಸಿದಳು. ಪ್ರತಿದಿನ ಸಂಜೆಯೂ ಬಿಸಿಲಿನಲ್ಲಿ ಅಭ್ಯಾಸ ಮಾಡಬೇಕೇ? ಬೇಡವೆಂಬಂತೆ ತಲೆಯಾಡಿಸಿ ತನ್ನ ತರಗತಿಯತ್ತ ಹೆಜ್ಜೆ ಹಾಕಿದಳು. ಅಂದು ಮಧ್ಯಾಹ್ನ ಶಾಲೆಯ ನಾಲ್ಕೂ ಪಂಗಡಗಳ ವಿದ್ಯಾರ್ಥಿಗಳು ಮೈದಾನದಲ್ಲಿ ಜಮಾಯಿಸಿದಾಗ, ಅವಳು ತಿರುಗಿಯೂ ನೋಡದೆ ಮನೆಗೆ ನಡೆದಳು.

ಮರುದಿನದಿಂದಲೇ ಮೈದಾನವು ಸೀಟಿಗಳ ಸದ್ದು, ಗಂಭೀರ ಆಜ್ಞೆಗಳು ಮತ್ತು ಹೆಜ್ಜೆಗಳ ದನಿಯಿಂದ ಜೀವಂತಗೊಂಡಿತು. ಆಲದ ಮರದ ಬಳಿ ನೀಲಿ ಪಂಗಡ, ವಾಲಿಬಾಲ್ ಅಂಕಣದ ಪಕ್ಕದಲ್ಲಿ ಹಳದಿ ಪಂಗಡ, ಮೈದಾನದ ಮಧ್ಯದಲ್ಲಿ ಕೆಂಪು ಪಂಗಡ ಹಾಗೂ ತುದಿಯಲ್ಲಿ ಹಸಿರು ಪಂಗಡಗಳು ಶಿಸ್ತಿನ ಹೆಜ್ಜೆ ಇಡತೊಡಗಿದವು. “ಎಡ… ಬಲ… ಎಡ… ಬಲ!” ಎನ್ನುವ ಶಿಕ್ಷಕರ ದನಿಗೆ ಸೂರ್ಯನ ಹೊಂಬಿಸಿಲಿನಲ್ಲಿ ಧೂಳೆಬ್ಬಿಸುತ್ತಾ ನೂರಾರು ಜೋಡಿ ಪಾದಗಳು ಒಟ್ಟಿಗೆ ಅಪ್ಪಳಿಸುತ್ತಿದ್ದವು.

ಪಥಸಂಚಲನಕ್ಕೆ ಸೇರದ ಪದ್ಮಾ, ಗೆಳತಿಯರೊಂದಿಗೆ ಮರದ ನೆರಳಿನಲ್ಲಿ ಕುಳಿತು ಈ ದೃಶ್ಯಗಳನ್ನು ಮೂದಲಿಸುತ್ತಿದ್ದಳು. ಕೆಲವು ತಂಡಗಳು ಲಯಬದ್ಧವಾಗಿದ್ದರೆ, ಇನ್ನು ಕೆಲವು ಗೊಂದಲದ ಗೂಡಾಗಿದ್ದವು. ಕೆಲವರ ಹೆಜ್ಜೆ ತಪ್ಪುತ್ತಿದ್ದರೆ, ಇಡೀ ಸಾಲುಗಳೇ ದಿಕ್ಕು ತಪ್ಪುತ್ತಿದ್ದವು. ಗೆಳತಿಯರತ್ತ ತಿರುಗಿ, “ನೋಡಿದ್ರಾ? ನಾವು ಸೇರದೆ ಇದ್ದದ್ದೇ ಒಳ್ಳೆಯದಾಯಿತು,” ಎಂದು ಅವಳು ನಸುನಕ್ಕಾಗ ಅವರೂ ಹೌದೆಂಬಂತೆ ತಲೆಯಾಡಿಸಿದರು.

ನೋಡನೋಡುತ್ತಿದ್ದಂತೆ ಸ್ವಾತಂತ್ರ್ಯ ದಿನಾಚರಣೆಯ ಸುದಿನವೂ ಬಂದೊದಗಿತು. ಶಾಲೆಯು ನವವಧುವಿನಂತೆ ಶೃಂಗಾರಗೊಂಡಿದ್ದರೆ, ಮೈದಾನದ ಮಧ್ಯದಲ್ಲಿದ್ದ ಧ್ವಜಸ್ತಂಭ ಹೆಮ್ಮೆಯಿಂದ ತಲೆಯೆತ್ತಿ ನಿಂತಿತ್ತು. ಮೈದಾನಕ್ಕಿಳಿದ ಹುಡುಗಿಯರು ಮಡಿಕೆ ಇಸ್ತ್ರಿಯ ಹಾಲುಬೆಳುಕಿನ ಬಿಳಿ ಸಮವಸ್ತ್ರ, ಬಣ್ಣದ ಟೋಪಿಗಳು ಮತ್ತು ಹೆಗಲ ಪಟ್ಟಿಗಳಲ್ಲಿ ಮಿನುಗುತ್ತಿದ್ದರು. ವೀಕ್ಷಕರ ಜಾಗದಲ್ಲಿದ್ದ ಪದ್ಮಾ, ಒಂದರ ಹಿಂದೆ ಒಂದರಂತೆ ಸಾಗುತ್ತಿದ್ದ ಪಂಗಡಗಳ ತಪ್ಪುಗಳನ್ನೇ ಹುಡುಕತೊಡಗಿದಳು. “ಅವರ ಸಾಲು ನೇರವಾಗಿಲ್ಲ”, “ನೀಲಿ ಪಂಗಡ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ…” ಹೀಗೆ ಟೀಕಿಸಿದಾಗಲೆಲ್ಲಾ ತಾನು ಭಾಗವಹಿಸದೇ ಇದ್ದದ್ದೇ ಸರಿ ಎಂಬ ಸುಳ್ಳು ಸಮಾಧಾನ ಅವಳಲ್ಲಿ ಮೂಡುತ್ತಿತ್ತು.

ಕೊನೆಗೂ ಸ್ಪರ್ಧೆ ಮುಕ್ತಾಯಗೊಂಡು ಫಲಿತಾಂಶದ ಕ್ಷಣ ಬಂದಿತು. ತೃತೀಯ ಮತ್ತು ದ್ವಿತೀಯ ಬಹುಮಾನಗಳು ಘೋಷಣೆಯಾದಾಗ ಇಡೀ ಮೈದಾನದಲ್ಲಿ ಕಾತರ ಮನೆಮಾಡಿತು. ಈಗ ಕೇವಲ ಪ್ರಥಮ ಬಹುಮಾನದ ಘೋಷಣೆ ಮಾತ್ರ ಬಾಕಿ ಇತ್ತು. ಸದಾ ಶಿಸ್ತಿಗೆ ಹೆಸರಾದ ‘ಕೆಂಪು ಪಂಗಡ’ ಮತ್ತು ತನ್ನದೇ ಆದ ‘ನೀಲಿ ಪಂಗಡ’ಗಳ ನಡುವೆ ತೀವ್ರ ಪೈಪೋಟಿ ನಡೆದಿದೆ ಎಂಬ ಸುಳಿವು ಸಿಗುತ್ತಿದ್ದಂತೆ ಪದ್ಮಾಳ ಎದೆಯಲ್ಲಿ ಹಠಾತ್ತಾಗಿ ನಡುಕ ಶುರುವಾಯಿತು. ತಾನು ಮುಂಜಾನೆಯಿಂದ ಟೀಕಿಸುತ್ತಿದ್ದ ತನ್ನದೇ ತಂಡ ಸೋತುಬಿಡುತ್ತದೆಯೋ ಎಂಬ ನಿಗೂಢ ಆತಂಕ ಅವಳನ್ನು ಆವರಿಸಿತು.

ಮುಖ್ಯೋಪಾಧ್ಯಾಯರು ಮೈಕ್ರೋಫೋನ್ ಹಿಡಿದು ಮುನ್ನೆಡೆದರು, “ಮತ್ತು, ಅತ್ಯುತ್ತಮ ಪಥಸಂಚಲನದ ಪ್ರಥಮ ಬಹುಮಾನ ಪಡೆಯುವ ಪಂಗಡ… ನೀಲಿ ಪಂಗಡ!”

ಇಡೀ ಮೈದಾನವು ಒಮ್ಮೆಗೆ ಹರ್ಷಘೋಷದಿಂದ ಪ್ರತಿಧ್ವನಿಸಿತು. ಹುಡುಗಿಯರು ಸಂಭ್ರಮದಿಂದ ಪುಟಿದೆದ್ದರು. ಆದರೆ ಪದ್ಮಾ ಮಾತ್ರ ಜಡವಾಗಿ ನಿಂತುಬಿಟ್ಟಳು. ಬಲಿಷ್ಠ ಕೆಂಪು ಪಂಗಡವನ್ನು ಹಿಂದಿಕ್ಕಿ ತನ್ನ ತಂಡ ವಿಜಯಶಾಲಿಯಾಗಿತ್ತೇ?

ಸ್ವಲ್ಪ ಸಮಯದ ನಂತರ, ಹುಡುಗಿಯರೆಲ್ಲರೂ ಧ್ವಜಸ್ತಂಭದ ಬಳಿ ಹೊಳೆಯುವ ಆ ವಿಜಯದ ಕಪ್ಪನ್ನು ಆಕಾಶದತ್ತ ಎತ್ತಿ ಹಿಡಿದರು. ಅಭ್ಯಾಸದ ದಿನಗಳಲ್ಲಾದ ತಮಾಷೆಯ ಪ್ರಸಂಗಗಳನ್ನು ನೆನೆದು ಒಟ್ಟಾಗಿ ನಗುತ್ತಿದ್ದರು. ಗೆಳತಿಯೊಬ್ಬಳು ಪದ್ಮಾಳನ್ನು ಗಮನಿಸಿ, “ಪದ್ಮಾ! ನಾವು ಗೆದ್ದೆವು! ನೀನೂ ನಮ್ಮ ಜೊತೆ ಇರಬೇಕಿತ್ತು. ಮೊದಮೊದಲು ಕಷ್ಟ ಅನ್ನಿಸಿದರೂ ಆಮೇಲೆ ತುಂಬಾ ಮಜವಾಗಿತ್ತು ಗೊತ್ತಾ?” ಎಂದು ಕೂಗಿದಳು.

ಪದ್ಮಾ ಸುಮ್ಮನೆ ತಲೆಯಾಡಿಸಿದಳು. ವಿಜಯದ ಕಪ್ಪಿನ ಸುತ್ತಲೂ ಸಂಭ್ರಮಿಸುತ್ತಿದ್ದ ಆ ಹುಡುಗಿಯರನ್ನು ನೋಡುತ್ತಿದ್ದಾಗ ಅವಳಿಗೆ ಸತ್ಯದ ದರ್ಶನವಾಯಿತು. ಅವರು ಕೇವಲ ಒಂದು ಗೆಲುವನ್ನು ಆಚರಿಸುತ್ತಿರಲಿಲ್ಲ; ಬದಲಿಗೆ, ತನಗಿಲ್ಲದ ಆ ಹದಿನೈದು ದಿನಗಳ ಮಧುರ ನೆನಪುಗಳನ್ನು ಒಟ್ಟಾಗಿ ಆಚರಿಸುತ್ತಿದ್ದರು! ಅದು ವಿಜಯದ ಸಂಕೇತವಲ್ಲ, ಆ ಬಹುಮಾನವೂ ಅಲ್ಲ; ಬದಲಿಗೆ, ಆ ಗೆಲುವಿನ ಹಿಂದಿದ್ದ ಸುಂದರ ಪಯಣ ಮತ್ತು ಸಾಮೂಹಿಕ ಶ್ರಮ.

ಅಂದು ಸಂಜೆ ಮೈಸೂರಿನ ತ್ರಿವರ್ಣ ದೀಪಗಳಿಂದ ಝಗಮಗಿಸುತ್ತಿದ್ದ ಪ್ರಮುಖ ವೃತ್ತದ ಮೂಲಕ ಮನೆಗೆ ಮರಳುವಾಗ, ರಸ್ತೆ ಬದಿಯಲ್ಲಿದ್ದ ಬೃಹತ್ ಪ್ರಚಾರ ಫಲಕವೊಂದು ಅವಳ ಗಮನ ಸೆಳೆಯಿತು. ಅದರ ಮೇಲೆ ದೀಪ್ತವಾಗಿ ಬರೆಯಲಾಗಿತ್ತು—“ವಿಕಸಿತ ಭಾರತ @ 2047: ಯುವಶಕ್ತಿಯೇ ದೇಶದ ಜೀವಾಳ”.

ಪ್ರಧಾನಮಂತ್ರಿಯವರ ಆ ರಾಷ್ಟ್ರೀಯ ಕರೆ ಪದ್ಮಾಳ ಮನಸ್ಸಿನಲ್ಲಿ ಹೊಸದೊಂದು ತಲ್ಲಣವನ್ನೇ ಸೃಷ್ಟಿಸಿತು. ಕಣ್ಣೆದುರೇ ಇಡೀ ದೇಶವು ಪ್ರಗತಿಯ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಲು ಹೆಜ್ಜೆ ಇಡುತ್ತಿರುವಾಗ, ಕೇವಲ ದಡದಲ್ಲಿ ಕುಳಿತು ತಪ್ಪುಗಳನ್ನು ಹುಡುಕುವ, ನಕಾರಾತ್ಮಕವಾಗಿ ಮೂದಲಿಸುವ ವೀಕ್ಷಕಿಯಾಗಿ ಉಳಿಯುವುದು ತನಗಾಗಲಿ ಅಥವಾ ದೇಶದ ಯಾವುದೇ ಯುವಕರಿಗಾಗಲಿ ಒಪ್ಪುವಂಥದ್ದಲ್ಲ ಎಂಬ ಜ್ಞಾನೋದಯ ಅವಳಿಗಾಯಿತು. ಯಾವುದೇ ಕರೆಯನ್ನು ಕೇವಲ ಉಪೇಕ್ಷೆಯಿಂದ ದಾಟಬಾರದು; ಬದಲಿಗೆ ಜವಾಬ್ದಾರಿಯಿಂದ ಸ್ವೀಕರಿಸಬೇಕು ಎಂಬ ಸತ್ಯ ಮನದಟ್ಟಾಯಿತು.

ಅಲಂಕೃತ ಬೀದಿಯ ಆ ತ್ರಿವರ್ಣದ ಬೆಳಕಿನಲ್ಲಿ ನಿಂತು ಪದ್ಮಾ ತನ್ನ ಅಂತರಾಳದಲ್ಲೇ ಒಂದು ದೃಢವಾದ ಶಪಥ ಮಾಡಿದಳು. ಇನ್ಮುಂದೆ ಅವಳು ಕೇವಲ ಕೊಂಕು ನುಡಿಯುವ ನಿಷ್ಕ್ರಿಯ ವೀಕ್ಷಕಳಾಗಿ ಉಳಿಯುವುದಿಲ್ಲ. ಮುಂದಿನ ವರ್ಷ ಶಾಲೆಯ ಸೂಚನಾ ಫಲಕದ ಮೇಲೆ ಪ್ರಕಟಣೆ ಮೂಡಿದಾಗ ಅವಳು ಅದನ್ನು ನಿರ್ಲಕ್ಷಿಸಿ ದಾಟುವುದಿಲ್ಲ. ಶಾಲೆಯ ಆ ಪಥಸಂಚಲನದಿಂದ ಹಿಡಿದು, ದೇಶ ಕಟ್ಟುವ ಪ್ರತಿಯೊಂದು ರಚನಾತ್ಮಕ ಕಾರ್ಯದಲ್ಲೂ ಅವಳು ಮುಂಚೂಣಿಯಲ್ಲಿ ನಿಲ್ಲುತ್ತಾಳೆ. ವಿಕಸಿತ ಭಾರತದ ಆ ಮಹಾನ್ ಪಯಣದಲ್ಲಿ, ಅವಳದ್ದೂ ಒಂದು ಹೆಜ್ಜೆ ಹೆಮ್ಮೆಯಿಂದ ಮುನ್ನಡೆಯುತ್ತದೆ.

ಸಂಕಲ್ಪದ ನಡಿಗೆ

ದಡದಲಿ ಕುಳಿತು ಅಲೆಗಳ ಎಣಿಸುತ ಸಮಯವ ಕಳೆಯದಿರು
ಬೇರೆಯವರ ಹೆಜ್ಜೆಯ ತಪ್ಪುಗಳನು ನೀ ನೋಡುತ ನಿಲ್ಲದಿರು
ಇದು ವಿಮರ್ಶೆಯ ಕಾಲವಲ್ಲ ಗೆಳೆಯಾ ಕರ್ತವ್ಯದ ಸಮಯ
ನಿನ್ನದೇ ಕೈಯಲಿ ಅರಳಲಿ ಇಂದು ವಿಕಸಿತ ಭಾರತದ ಉದಯ

ಕೋಟಿ ಹೆಜ್ಜೆಗಳು ಒಟ್ಟಿಗೆ ನಡೆದರೆ ಹಾದಿಯು ಸುಲಭವು
ಸಣ್ಣ ಕಣವೂ ಜೊತೆಯಾದರೆ ಜಗವನೆ ಗೆಲ್ಲುವ ವೈಭವವು
ಏಳು ಇಡು ನೀ ನಿನ್ನದೇ ಹೆಜ್ಜೆ ಮೂಡಲಿ ನವ ಚರಿತೆ
ತ್ರಿವರ್ಣದ ನೆರಳಲಿ ಜೊತೆಯಾಗಿ ಬರೆಯೋಣ ಪ್ರಗತಿಯ ಕವಿತೆ.